ಗೋಕಾಕ

	ಕರ್ನಾಟಕದ ಬೆಳಗಾಂವಿ ಜಿಲ್ಲೆಯ ಒಂದು ತಾಲ್ಲೂಕು; ಆ ತಾಲ್ಲೂಕಿನ ಕೇಂದ್ರ. ತಾಲ್ಲೂಕಿನ ವಿಸ್ತೀರ್ಣ 1,543,78, ಚ ಕಿಮೀ, ತಾಲ್ಲೂಕಿನಲ್ಲಿ 105 ಹಳ್ಳಿಗಳೂ 2 ಪಟ್ಟಣಗಳೂ ಇವೆ. ಅದರ ಜನಸಂಖ್ಯೆ 5,25,865 (2001). ತಾಲ್ಲೂಕಿನ ಪಶ್ಚಿಮ ಭಾಗ ಗುಡ್ಡಗಾಡು. ಉಳಿದ ಭಾಗ ಸಮತಟ್ಟಾಗಿದೆ. ಗೋಕಾಕದ ಪಟ್ಟಣದ ಬಳಿ ಇರುವ ನಾರಾಯಣಗುಡ್ಡ ಆ ತಾಲ್ಲೂಕಿನ ಅತ್ಯಂತ ಎತ್ತರದ ಸ್ಥಳ. ತಾಲ್ಲೂಕಿನಲ್ಲಿ ಹರಿಯುವ ನದಿಗಳು ಘಟಪ್ರಭಾ ಮತ್ತು ಮಾರ್ಕಂಡೇಯ. ಗೋಕಾಕದ್ದು ಉಷ್ಣವಾಯುಗುಣ. ವಾರ್ಷಿಕ ಮಳೆ ಸು. 25" ಹತ್ತಿ. ಜೋಳ ಇಲ್ಲಿಯ ಮುಖ್ಯ ಬೆಳೆಗಳು. ಬೇಳೆಕಾಳುಗಳೂ ಬೆಳೆಯುತ್ತವೆ. ಘಟಪ್ರಭಾ ನದಿಯ ಗೋಕಾಕ ಜಲಪಾತ ಗೋಕಾಕ ಪಟ್ಟಣದ ವಾಯವ್ಯಕ್ಕೆ ಸು. 6 ಕಿ.ಮೀ. ದೂರದಲ್ಲಿದೆ. ಇಲ್ಲಿ ಘಟಪ್ರಭಾ ನದಿ 170' ಎತ್ತರದಿಂದ ಧುಮುಕುತ್ತದೆ. ಈ ಧಬಧಬೆಯ ಬಳಿ 1887ರಲ್ಲಿ ಒಂದು ಜವಳಿ ಗಿರಣಿ ಸ್ಥಾಪಿತವಾಯಿತು. ಇಲ್ಲಿ ಸಣ್ಣಗಾತ್ರದ ಒಂದು ವಿದ್ಯುದುತ್ಪಾದಕ ಕೇಂದ್ರವಿದೆ. ಇದಕ್ಕಾಗಿ ನಿರ್ಮಿಸಲಾದ ಜಲಾಶಯದಿಂದ ಸುತ್ತಣ ಪ್ರದೇಶಕ್ಕೆ ನೀರಾವರಿ ಸೌಲಭ್ಯವೂ ಒದಗಿದೆ. ಧಬಧಬೆಯ ಹತ್ತಿರ ಒಂದು ತೂಗುಸೇತುವೆಯುಂಟು. ಗೋಕಾಕದ ಬಳಿ ಇರುವ ಪಂಚಮಿ ಗುಡ್ಡದಲ್ಲಿ ಹಲವು ಬಗೆಯ ಶಿಲೆಗಳು ದೊರಕುತ್ತವೆ. 

	ಗೋಕಾಕ ಪಟ್ಟಣ ಉ. ಅ. 160 40' ಮತ್ತು 740 49' ಮೇಲಿದೆ; ದಕ್ಷಿಣ ರೈಲ್ವೆ ಮಾರ್ಗದ ಗೋಕಾಕ ರೋಡ್ ನಿಲ್ದಾಣದಿಂದ ಊರು 13 ಕಿ.ಮೀ. ದೂರದಲ್ಲಿದೆ. ಗೋಕಾಕದ ಬಣ್ಣದ ಆಟಿಕೆಗಳೂ ಕರದಂಟು ಎಂಬ ಖಾದ್ಯ ವಸ್ತುವೂ ಪ್ರಸಿದ್ಧವಾದವು. ಇವು ಹೊರ ದೇಶಗಳಿಗೂ - ಮುಖ್ಯವಾಗಿ ಅಮೆರಿಕಕ್ಕೆ - ನಿರ್ಯಾತವಾಗುತ್ತವೆ. ಆಟಿಗೆ ಕೈಗಾರಿಕೆ 150 ವರ್ಷಗಳಷ್ಟು ಹಳೆಯದು. ಚಿನಗಾರರು ನಿರ್ಮಿಸುವ ಗೌರಿಗಳು ತುಂಬ ಸುಂದರವಾಗಿವೆ. ಆದರೆ ಈಗ ಕೈ ಕಸಬುದಾರರ ಸಂಖ್ಯೆ ಕಡಿಮೆಯಾಗಿದೆ. ಅವರಿಗೆ ಉತ್ತೇಜನ ನೀಡಲು ಒಂದು ಸಹಕಾರ ಸಂಘವುಂಟು. ಬಟ್ಟೆ ನೇಯುವ ಮತ್ತು ಅದಕ್ಕೆ ಬಣ್ಣ ಹಾಕುವ ಕಸಬುಗಳು ಪ್ರವರ್ಧಮಾನ ಸ್ಥಿತಿಯಲ್ಲಿದ್ದುವು. ಆದರೆ ಕ್ರಮೇಣ ಇವು ನಶಿಸಿದುವು. ಸರ್ಕಾರ ಇವಕ್ಕೆ ಈಚೆಗೆ ಪ್ರೋತ್ಸಾಹ ನೀಡುತ್ತಿದೆ. 

	ಚಿದಂಬರೇಶ್ವರ ಶಿಷ್ಯರಾದ ಬೊಠೆಮಹಾರಾಜರು ಗೋಕಾಕದವರು; ಗಳಗನಾಥರು ತಮ್ಮ ಮಹಾಭಾರತದ ಆದಿಪರ್ವವನ್ನು ಇಲ್ಲಿಯ ವೆಂಕಟೇಶ್ವರ ಗುಡಿಯಲ್ಲಿ ಕುಳಿತು ಬರೆದರು. ಆದಿಶಂಕರಾಚಾರ್ಯರ ದೊಡ್ಡ ಗುಡಿ ಇಲ್ಲಿದೆ. ಅಖಿಲಭಾರತ ಖ್ಯಾತಿ ಚಿತ್ರಗಾರರಾದ ಸಾಂಬಪ್ಪ ಚಿತ್ರಗಾರ, ಶಂಕರಪ್ಪ ಚಿತ್ರಗಾರ ಗೋಕಾಕದವರು. ಅವರು ತಯಾರಿಸಿದ ಗಣಪತಿಗಳು ಅನೇಕ ರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿದೆ. 

	ಗೋಕಾಕ ಪಟ್ಟಣದ ಜನಸಂಖ್ಯೆ 67,166 (2001). ಇಲ್ಲೊಂದು ಪುರಸಭೆ ಇದೆ. ಅದು ಬಹುಕಾಲದಿಂದ ನಡೆಸಿಕೊಂಡು ಬಂದ ಪ್ರೌಢಶಾಲೆಯಲ್ಲದೆ ಇಲ್ಲಿ ಇನ್ನೂ ಮೂರು ಪ್ರೌಢಶಾಲೆಗಳಿವೆ. ಇವುಗಳಲ್ಲಿ ಒಂದು ಬಾಲಿಕಾ ಪ್ರೌಢಶಾಲೆ. ಇಲ್ಲಿ ಕಾಲೇಜೂ ಇದೆ. ಇಲ್ಲಿಯ ಒಂಬತ್ತು ಪ್ರಾಥಮಿಕ ಶಾಲೆಗಳಲ್ಲಿ ಒಂದು 1858 ರಷ್ಟು ಹಿಂದೆ ಸ್ಥಾಪಿತವಾದ್ದು. ಇನ್ನೆರಡು 1878ರಲ್ಲಿ ಪ್ರಾರಂಭವಾದುವು. 

	ಗೋಕಾಕ್ಕೆ ಸಾಕಷ್ಟು ಹಳೆಯ ಇತಿಹಾಸವುಂಟು. 1047ರ ಒಂದು ಶಾಸನದಲ್ಲಿ ಈ ಸ್ಥಳದ ಉಲ್ಲೇಖವಿದೆ. ಅಲ್ಲಿ ಇದನ್ನು ಗೋಕಾಗೆ ಎಂದು ಹೆಸರಿಸಿದೆ. 1685ರಲ್ಲಿ ಇದು ಅಂದಿನ ಸ್ಥಳೀಯ ಸರ್ಕಾರದ ಕೇಂದ್ರವಾಗಿತ್ತು. 1717-1754ರಲ್ಲಿ ಸವಣೂರು ನವಾಬರ ಅಧೀನಕ್ಕೆ ಒಳಪಟ್ಟಿತ್ತು. ಆಗ ಇಲ್ಲಿ ಹಲವು ಮಸೀದಿಗಳ ನಿರ್ಮಾಣವಾಯಿತು. ಅನಂತರ ಮತ್ತೆ ಹಿಂದೂಗಳ ವಶಕ್ಕೆ ಬಂದ ಈ ಪಟ್ಟಣ 1836ರಲ್ಲಿ ಇಂಗ್ಲಿಷರ ವಶವಾಯಿತು.
(ಎಸ್.ವಿ.ಪಿಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ